ರೈಯಲೈಟ್
ಸೂಕ್ಷ್ಮಕಣರಚನೆ ಇರುವ, ತಿಳಿಕಡುಬಣ್ಣದ ಒಂದು ಅಗ್ನಿಶಿಲೆ. ಬಹಿಸ್ಸರಣ ವರ್ಗಕ್ಕೆ (ಎಕ್ಸ್‍ಟ್ರೂಷಸ್) ಸೇರಿದೆ. ಪರ್ಯಾಯ ನಾಮ ಲಿಪಾರೈಟ್ ಬಹುತೇಕ ಕ್ಷಾರಫೆಲ್ಡ್‍ಸ್ಟಾರ್ ಮತ್ತು ನಿರ್ಬಂಧಿತ ಸಿಕತದೊಡನೆ (ಬೆಣಚು), ಭಾಗಶಃ ಕಡುಬಣ್ಣದ ಖನಿಜ ಸಂಯೋಜನೆ ಯಿಂದ ಆಗಿರುವಂಥದು. ಕೆಲವು ವೇಳೆ ಈ ಶಿಲೆಯಲ್ಲಿ ಅಸಮ ಕಣರಚನೆ ಇರುವುದುಂಟು. ರಾಸಾಯನಿಕವಾಗಿ ನಿಕಟ ಮತ್ತು ಅಧಿಕ ಸಿಕತಾಂಶ ಯುಕ್ತವಾಗಿರುವುದು ಇದರ ಒಂದು ವೈಶಿಷ್ಟ್ಯ. ರೈಯಲೈಟ್ ನಲ್ಲಿರುವ ಬೆಣಚು ಒಮ್ಮೊಮ್ಮೆ ಬೀಟಾ ರೂಪದ್ದಾಗಿರ ಬಹುದು, ಇಲ್ಲವೇ ಅದರಿಂದ ಹೂರಣಗೊಂಡು ಪೂರಕವಾದುದಾಗಿರ ಬಹುದು. ಈ ಶಿಲೆಗೆ ಸರಿಸಮವಾದ ಟ್ರ್ಯಾಕೈಟ್‍ನಲ್ಲಿ ಭೂಅಂತರಾಳದಲ್ಲಿಯ ಪ್ಲೂಟಾನಿಕ್ ಶಿಲೆಗಳಿಗಿಂತ ಕಡಿಮೆ ಮೊತ್ತದ ಕಬ್ಬಿಣ-ಮೆಗ್ನೀಸಿಯಮ್ ಖನಿಜಗಳಿರುತ್ತವೆ. ರೈಯಲೈಟ್ ಶಿಲೆಯಲ್ಲಿರುವ ಫೆಲ್ಡ್‍ಸ್ಟಾರ್ ಖನಿಜ ವಿಧಗಳನ್ನು ಆಧರಿಸಿ, ಸೋಡಿಯಮ್‍ಯುಕ್ತ ರೈಯಲೈಟ್ ಮತ್ತು ಪೊಟ್ಯಾಸಿಯಮ್‍ಯುಕ್ತ ರೈಯಲೈಟ್ ಎಂಬ ಎರಡು ಬಗೆಯ ಶಿಲೆಗಳನ್ನು ಗುರುತಿಸಲಾಗಿದೆ. ಬೆಣಚುಯುಕ್ತ ಸಯನೈಟ್ ಶಿಲಾವರ್ಗಕ್ಕೆ ಸೇರಿದ ಕೆರಟೊಫೈರ್ ಅಥವಾ ಕ್ವಾಟ್ರ್ಜ್ ಕೆರೆಟೂಫೈರ್ ಎಂಬುದನ್ನು ಸೋಡಿಯಮ್‍ಯುಕ್ತ ರೈಯಲೈಟ್ ಇಲ್ಲವೇ ಬೆಣಚುಯುಕ್ತ ಟ್ರ್ಯಾಕೈಟ್ ಬಗೆಯದು ಎಂದೇ ಹೇಳಬಹುದು. ಈ ಬಗೆಯ ಶಿಲೆಗಳಲ್ಲಿ ಕಬ್ಬಿಣ-ಮೆಗ್ನೀಸಿಯಮ್ ಖನಿಜಗಳಿರುವುದಿಲ್ಲ. ಆದ್ದರಿಂದ ಈ ತೆರನ ರೈಯಲೈಟನ್ನು ಸ್ಪೈಲೈಟ್‍ಶಿಲೆಗಳ ಸಂಬಂಧಿ ಎಂದು ಹೇಳಲಾಗಿದೆ. ಈ ಶಿಲೆಯ ಇನ್ನೊಂದು ಬಗೆ ಪಾಂಟಿಲ್ಲೆರೈಟ್. ಇದರಲ್ಲಿ ಸೋಡಾ-ಪೊಟ್ಯಾಷ್ ಫೆಲ್ಡ್‍ಸ್ಟಾರ್, ಬೆಣಚು ಮತ್ತು ಏಜರೀನ್ (ಕಬ್ಬಿಣಾಂಶಯುಕ್ತ ಆಗೈಟ್ ಬಗೆ) ಇಲ್ಲವೇ ಕೆಲವು ವೇಳೆ ಸೋಡಾಯುಕ್ತ ಆಂಫಿಬೋಲ್ ಖನಿಜ ಇರಬಹುದು. ಅಡೆಮಲೈಟ್ ಶಿಲೆಗೆ ಸರಿಸಮವಾದ ಅಗ್ನಿಶಿಲೆಗಳಿಗೆ ಟೋಸ್ಕನೈಟ್ ಅಥವಾ ರೈಯೋಡೇಸೈಟ್ ಶಿಲೆಗಳೆಂದು ಹೆಸರು.
ಆಮ್ಲೀಯ ವರ್ಗದ ಗಾಜಿನಂಥ ರೈಯಲೈಟ್ ಶಿಲಾ ಬಗೆಯನ್ನು ಅಬ್ಸಿಡಿಯನ್ ಅಥವಾ ಪಿಚ್‍ಸ್ಟೋನ್ ಎಂದು ಕರೆದಿದೆ. ಇದು ಕಪ್ಪು ಬಣ್ಣದ, ಸಂಪೂರ್ಣವಾಗಿ ಗಾಜಿನಂತಿರುವ ಶಿಲೆ. ಇದನ್ನು ಸುತ್ತಿಗೆಯಿಂದ ಬಡಿದಾಗ ವಿಶಿಷ್ಟ ಹಾಗೂ ಈ ಶಿಲೆಗೇ ಸೀಮಿತವಾದ ಅರ್ಧವರ್ತುಲಾಕಾ ರದ ಮೆಟ್ಟಿಲು ಮೆಟ್ಟಿಲಾದ (ಕನ್‍ಕಾಯ್ಡಲ್ ಫ್ರಾಕ್ಚರ್) ಚಕ್ಕೆ ಏಳುತ್ತದೆ. ಇದೇ ತೆರದ ರೀತಿಯ ಗಾಜಿನಂಥ ಮತ್ತೊಂದು ಶಿಲೆ ಪಿಚ್‍ಸ್ಟೋನ್. ಆದರೆ ಈ ಶಿಲೆಯಲ್ಲಿ ಪಟಿಕೀಕೃತ ಹರಳುಗಳ ಅಂಶ ಹೆಚ್ಚಾಗಿರುವು ದಲ್ಲದೆ, ಅಬ್ಸಿಡಿಯನ್ ಶಿಲೆಗಿಂತಲೂ ವಿಭಿನ್ನವಾಗಿರುವ ಸಮತಟ್ಟಾದ ಚಕ್ಕೆ ಏಳುತ್ತದೆ. ಪಿಚ್‍ಸ್ಟೋನ್ ಶಿಲೆ ಕಪ್ಪು, ಕಡು ಊದಾ, ಕೆಂಪು ಇಲ್ಲವೇ ಕಂದು ಬಣ್ಣದ್ದಾಗಿರಬಹುದು. ಸಾಮಾನ್ಯವಾಗಿ ಈ ಶಿಲೆಗಳು ಶಿಲಾ ಒಡ್ಡುಗಳಂತೆ ಇಲ್ಲವೆ ಲಾವ ಪ್ರವಾಹಪದರಗಳಂತೆ ಕಾಣಸಿಗುವುದು ಅತಿವಿರಳ. ಅಬ್ಸಿಡಿಯನ್ ಮತ್ತು ಪಿಚ್‍ಸ್ಟೋನ್‍ಗಳೆರಡೂ ನಿರ್ಗಾಜೀ ಕರಣಕ್ರಿಯೆಯ ಆರಂಭದೆಸೆಯನ್ನು ಪ್ರದರ್ಶಿಸುತ್ತವೆ. ಇದರಿಂದಾಗಿ ಹರಳು ಕಂತೆಗಳ ಕಟ್ಟುಗಳು (ಸ್ಫೆರುಲೈಟ್ಸ್) ಅಲ್ಲಲ್ಲಿ ಹೊರಹೊಮ್ಮಿರು ತ್ತವೆ. ಆದ್ದರಿಂದ ಈ ಶಿಲೆಯನ್ನು ಸ್ಫೆರುಲಿಟಿಕ್ ಪಿಚ್‍ಸ್ಟೋನ್ ಎಂದು ಕರೆದಿದೆ. ಇಂಥ ಶಿಲೆಗಳಲ್ಲಿ ನಿರ್ಗಾಜೀಕರಣಕ್ರಿಯೆ ನಿರಂತರವಾಗಿ ಮುಂದುವರಿದಂತೆ ಲ್ಲ ಅವು ಫೆಲ್‍ಸೈಟ್ ಆಗಿ ಮಾರ್ಪಡುತ್ತವೆ. ನಿರ್ಗಾಜೀಕರಣ ಅವಸ್ಥೆಯ ಆರಂಭ ಸ್ಫೆರುಲೈಟುಗಳನ್ನು ಉತ್ಪತ್ತಿಮಾಡು ವುದಾದರೂ ಆ ಕ್ರಿಯೆ ರೈಯಲೈಟನ್ನು, ಸ್ಫೆರುಲಿಟಿಕ್ ರೈಯಲೈಟ್ ಶಿಲೆಯಾಗುವಂತೆ ಇಲ್ಲವೇ ವೇರಿಯೊಲೈಟ್ ಎಂಬ ವಿನೂತನ ಶಿಲೆಯಾಗುವಂತೆ ಮಾಡುತ್ತದೆ. ಇಂಥ ಶಿಲೆಯನ್ನು ಗ್ರಂಥಿಪೂರಣಗೊಂಡ ರೈಯಲೈಟ್ ಬಗೆಯಿಂದ ಎಚ್ಚರಿಕೆ ವಹಿಸಿ ವಿಂಗಡಿಸಲಾಗುತ್ತದೆ. ಏಕೆಂದರೆ ಈ ಶಿಲೆಗಳಲ್ಲೊ ಗ್ರಂಥಿಗಳು ಸಿಕತದಿಂದ ಪೂರಕವಾಗಿದ್ದರೆ ಅದು ಮೇಲ್ನೋಟಕ್ಕೆ ಸ್ಫೆರುಲೈಟ್‍ನಂತೆಯೇ ಕಾಣುವುದು ಸಹಜ.
ರೈಯಲೈಟ್‍ನಲ್ಲಿ ಸಿಕತಾಂಶ ಕಡಿಮೆಯಾದಂತೆಲ್ಲ ಅದು ಟ್ರ್ಯಾಕೈಟ್ ಆಗಿ ಪರಿವರ್ತನಗೊಂಡು ಕ್ರಮೇಣ ಡೇಸೈಟ್ ಶಿಲೆಯಾಗಿ ಮಾರ್ಪಡುತ್ತದೆ. ಹಾಗೆಯೇ ಸಿಕತಾಂಶ ಕೊರತೆ ಮುಂದುವರಿದಂತೆ ಆ್ಯಂಡಿಸೈಟ್ ಶಿಲೆಯಾಗಿ ಮಾರ್ಪಡುತ್ತದೆ. ರೈಯಲೈಟ್ ಶಿಲಾರಸಕ್ಕೆ ವಿಶೇಷತಃ ಅಧಿಕ ಸ್ನಿಗ್ಥತೆ ಇರುವುದು. ಇತ್ತೀಚಿನ ದಿವಸಗಳಲ್ಲಿ ಜ್ವಾಲಾಮುಖಿಗಳ ದ್ವಾರದಲ್ಲಿ ರೈಯ ಲೈಟ್‍ಗಳು ವಿಸ್ತಾರ ಪ್ರವಾಹಗಳಂತೆ ರೂಪುಗೊಳ್ಳುವುದು ವಿರಳವೆನಿಸಿದೆ.

ರೈಯಲೈಟ್ ಶಿಲೆಯಲ್ಲಿ ಹಲವು ವಿಧüಗಳುಂಟು. ಜ್ವಾಲಾಮುಖಿಜ ಗಾಜು ಒಂದು (ರೈಯಲಿಟಿಕ್ ಗ್ಲಾಸ್) ಮತ್ತೊಂದು ರೈಯಲೈಟ್ ಲಾವಾರಸ. ಈ ಲಾವಾರಸಕ್ಕೆ ಅಧಿಕ ಸ್ನಿಗ್ಧತೆಯಿದೆ. ಇದರಲ್ಲಿ ಸಮೃದ್ಧ ಸಿಕತಾಂಶವಿರುವುದು. ಇದೇ ಶಿಲೆಯ ಇನ್ನೊಂದು ಬಗೆ ಎಂದರೆ ರೈಯಲಿಟಿಕ್ ಶಿಲಾಪಾಕ (ಮ್ಯಾಗ್ಮ) ಇದು ಭೂ ಅಂತರಾಳದಲ್ಲಿರುವ ಶಿಲಾಪಾಕದ ಬೃಹದಾಕಾರದಿಂದ (ಕೋಶ) ಅತ್ಯಧಿಕ ಒತ್ತಡದಲ್ಲಿ, ಮೇಲೊತ್ತರಿಸಿಕೊಂಡು, ಬಿರುಕುಗಳಿಂದ ಹೊರಬರುವ ಶಿಲಾಪಾಕ. ಭೂ ಅಂತರಾಳದಲ್ಲಿಯ ಗುಹಾಂತರಗಳಲ್ಲಿ ತಣ್ಣಗಾಗಬಹುದು, ಇಲ್ಲವೆ ಪಾಕ ಮೇಲೇರುವಾಗ ಅಧಿಕ ಉಷ್ಣತೆಯಿಂದ (2000ಸೆ) ಅಕ್ಕಪಕ್ಕದ ಸಿಕತಾಂಶಯುಕ್ತ ಶಿಲೆಗಳು ದ್ರವಿಸಿ ಜೀರ್ಣವಾಗಿಹೋಗುವುದರಿಂದ ಈ ರೀತಿಯ ಶಿಲಾಪಾಕ ಉದ್ಭವಿಸಬಹುದು. ರೈಯಲಿಟಿಕ್ ಶಿಲಾಪಾಕ ಭೂಅಂತರಾಳದಿಂದ ಪ್ರಾರಂಭಿಸಿ ಜ್ವಾಲಾಮುಖಿಯ ದ್ವಾರದಿಂದ ಹೊರ ಚೆಲ್ಲಿದ ಶಿಲಾರಸ ಅಥವಾ ಲಾವಾರಸ ಅಗ್ನಿಪರ್ವತದ ಬೂದಿಯೊಂದಿಗೆ ಕೂಡಿಕೊಂಡು ಘನೀಭವಿಸುವುದರಿಂದ ಮತ್ತೊಂದು ವಿಧದ ರೈಯಲಿಟಿಕ್ ಟುಫ್ ಎಂಬ ಶಿಲೆ ಏರ್ಪಡುತ್ತದೆ. ಪ್ರಬಲ ಸ್ಫೋಟಕ ಜ್ವಾಲಾಮುಖಿಗಳಿಂ ದ ಸಿಡಿದು ಬಂದ, ಅಧಿಕ ಸ್ನಿಗ್ಧತೆಯ ವಿಶೇಷ ಲಕ್ಷಣದ ಲಾವಾರಸ ಹರಿದು ಬಂದು, ಆರಿ ತಣ್ಣಗಾಗುವುದರಿಂದ ಉದ್ಭವಿಸಿದ ಶಿಲೆಯೇ ರೈಯಲೈಟ್. ಇಂಥ ಶಿಲೆಗಳನ್ನು ಉತ್ತರ ಅಮೆರಿಕ ನೈಋತೃ ಭಾಗದ ಪ್ರದೇಶಗಳಲ್ಲೆಲ್ಲ ಹಾಗೂ ವ್ಯೋಮಿಂಗ್ ರಾಜ್ಯದ ಎಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್‍ನಲ್ಲಿ ಕೂಡ ಯಥೇಚ್ಛವಾಗಿ ಕಾಣಬಹುದು. ಲಾವಾರಸ ಹರಿದು ಬಂದು ಸ್ತರಗಳೋಪಾದಿಯಲ್ಲಿ ನಿಂತು ಕ್ರಮೇಣ ತಣ್ಣಗಾಗುವುದರಿಂದ, ಅಲ್ಲಲ್ಲಿ ಸ್ಫುಟವಾದ ಹರಳುಗಳು ಕಾಣಬರುತ್ತವೆ. ಆದ್ದರಿಂದ ರೈಯಲೈಟ್ ಲಾವಾರಸದ ಹರಿವುಗಳು ಜ್ವಾಲಾಮುಖಿಜ ಛಿದ್ರ ಪೆಂಟೆಗಳೊಡನೆ ಬೆಸೆದುಕೊಂಡು ಬ್ರೆಕ್ಷಿಯಾ ಶಿಲೆಗಳನ್ನು ಒಳಗೊಂಡಂತೆ ಕಾಣಸಿಗಬಹುದು. ಈ ಶಿಲೆ ಕೆಲವೊಮ್ಮೆ ಜ್ವಾಲಾಮುಖಿಯ ದ್ವಾರದ, ಕಂಠದ ಅಂಚಿನಲ್ಲಿ ಪಿಸುರಿನಂತೆ ಇಲ್ಲವೆ ಒಡ್ಡುಗಳಂತೆ ಘನೀಭವಿಸಿಯೂ ಇರುತ್ತದೆ.

ಲಕ್ಷಾಂತರ ಚ.ಕಿಮೀ ವಿಸ್ತರಿಸಿರುವ ಭಾರತದ ದಖನ್‍ಟ್ರಾಪ್ ಶಿಲೆಗಳಲ್ಲಿ ಹಲವಾರು ವಿಧದ ರೈಯಲೈಟ್‍ಗಳು ಕಾಣಸಿಗುತ್ತವೆ. ಉದಾಹರಣೆಗೆ, ಜೋಧ್‍ಪುರ ಸಮೀಪವಿರುವ ಮಲಾನಿಸ್ತರ ಶ್ರೇಣಿಗಳು, ಅದೇ ಹೆಸರಿನ ಜಿಲ್ಲೆಯಲ್ಲಿ ಸಹಸ್ರಾರು ಚದರ ಕಿಮೀ ವಿಸ್ತೀರ್ಣಕ್ಕೆ ವಿಸ್ತರಿಸಿರುವ ಅಗ್ನಿಶಿಲಾಶ್ರೇಣಿಗಳು. ಈ ಶ್ರೇಣಿಯ ಶಿಲೆಗಳು ಭಾಗಶಃ ಗಾಜಿನಂತಿದ್ದು ನಿರ್ಗಾಜೀಕರಣ ಕ್ರಿಯೆಗೆ ಈಡಾಗಿ, ಗ್ರಂಥಿಪೂರಣವುಳ್ಳ ಲಾವಾರಸ ಅಗ್ನಿಪರ್ವತಬೂದಿ ಮತ್ತು ಮೊನಚಾದ ಪೆಂಟೆಗಳ ಅಂತರಸ್ತರಗಳನ್ನು ಒಳಗೊಂಡಿರುತ್ತವೆ. ಇಂಥ ಘನೀಭವಿತ ಲಾವಾರಸ ದಲ್ಲಿ ರೈಯಲೈಟ್‍ನಿಂದ ಬೆಣಚುಯುಕ್ತ ಆ್ಯಂಡಿಸೈಟ್‍ನ ಶಿಲಾಸಂಯೋಜನೆ ವರೆಗಿನ ವ್ಯತ್ಯಾಸವನ್ನೂ ಆಮ್ಲೀಯತೆಯ ವ್ಯತ್ಯಾಸವನ್ನೂ ಕಾಣಬಹುದು. ಆರಾವಳಿ ಪರ್ವತಶ್ರೇಣಿಗಳ ಸಮೀಪದಲ್ಲಿ ಫೆಲೆಸೈಟ್-ರೈಯಲೈಟ್ ಮತ್ತು ಜ್ವಾಲಮುಖಿಜ ಬೂದಿಯನ್ನು ಒಳಗೊಂಡಂತಿರುವ ಮಲಾನಿ ರೈಯಲೈಟ್ ಶಿಲಾಸ್ತರಗಳು ಕಾಣಸಿಗುತ್ತವೆ. ಮೇವಾರಕ್ಕೆ ಆಗ್ನೇಯ ದಿಕ್ಕಿನಲ್ಲಿ ಹರಡಿಕೊಂಡಿರುವ ರೈಯಲೈಟ್‍ಗಳು ವಿಂಧ್ಯ ಬೃಹತ್‍ಶಿಲಾ ವರ್ಗಕ್ಕೆ ಸೇರಿದ್ದು, ಅವುಗಳ ಸೆಮ್ರಿ ಸುಣ್ಣಶಿಲಾಸ್ತರಗಗಳಲ್ಲಿ ಮಲಾನಿ ಜ್ವಾಲಾಮುಖಿಜ ಶಿಲೆಗಳೂ ಇವೆ.

ವಡೋದರಕ್ಕೆ (ಬರೋಡ) ಸಮೀಪವಿರುವ ಪಾವಗಡ ಬೆಟ್ಟಗಳಲ್ಲಿ ಮತ್ತು ಕಾಥಿüಯಾವಾಡದಲ್ಲಿರುವ ಗಿರ್‍ನಾರ್ ಬೆಟ್ಟಪಂಕ್ತಿಗಳಲ್ಲೂ ರೈಯಲೈಟ್ ಶಿಲೆಗಳು ಕಾಣಸಿಗುತ್ತವೆ. ದಖನ್ ಟ್ರಾಪ್ (ಬೆಸಾಲ್ಟ್) ಬೃಹತ್‍ಶಿಲಾ ಸಮುದಾಯದಲ್ಲೂ ಅಲ್ಲಲ್ಲಿ ಕಂಡುಬಂದಿವೆ. ವಿಶೇಷವಾಗಿ ಕಚ್ ಪ್ರದೇಶದಿಂದ ಮುಂಬೈವರೆಗಿನ ಕರಾವಳಿಯ ಬೆಸಾಲ್ಟ್ ಶಿಲೆಗಳಲ್ಲಿ ರೈಯಲೈಟ್ ಹೇರಳವಾಗಿ ದೊರೆಯುತ್ತದೆ. ಕರ್ನಾಟಕದಲ್ಲಿ ರೈಯಲೈಟ್ ಶಿಲಾಬಗೆಗಳು ಕಿರಿಯ ಧಾರವಾಡ ಶಿಲಾವರ್ಗಕ್ಕೆ ಸೇರಿದ, 260 ಕೋಟಿ ವರ್ಷಗಳಷ್ಟು ಪ್ರಾಚೀನವಾದ, ಶಿವಮೊಗ್ಗ, ಚಿತ್ರದುರ್ಗ, ಗದಗ-ಡಂಬಳ ಶಿಷ್ಟ್ ಶಿಲಾಶ್ರೇಣಿಗಳಲ್ಲಿ (ಶಿರಹಟ್ಟಿ ಸಮೀಪ) ಅಲ್ಲಲ್ಲೇ ಕಾಣಸಿಗುತ್ತವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ, ಅದರಲ್ಲೂ ದಖನ್‍ಟ್ರ್ಯಾಪ್ ಶಿಲೆಗಳಿರುವ ಪ್ರದೇಶಗಳಲ್ಲಿ ಅಲ್ಪ ಸ್ವಲ್ಪ ಜ್ವಾಲಾಮುಖಿಜ ಬೂದಿ ಮತ್ತು ಮೊನಚಾದ ಪೆಂಟೆಗಳ ಜೊತೆಗೂಡಿರುವ ರೈಯಲೈಟ್ ಪಿಚ್‍ಸ್ಟೋನ್‍ಗಳು ವಿರಳವಾಗಿ ದೊರೆಯುತ್ತವೆ. 

(ಟಿ.ವಿ.ಎಸ್.:ಬಿ.ವಿ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ